ವಿಧಾನ ಸೌಧಕ್ಕೆ ಆಹ್ವಾನ!

Lavanya Hebbalmath with Dr Vijaya, noted writer and journalist during the felicitation event by Tejas Kannada Sangha

Lavanya Hebbalmath with Dr Vijaya, noted writer and journalist during the felicitation event by Tejas Kannada Sangha

ಕಳೆದ ತಿಂಗಳು ಒಂದು ದಿನ ಮನುಕುಮಾರ್ ರವರು ಕರೆ ಮಾಡಿ ನಮ್ಮ ಕನ್ನಡ-ಪುಸ್ತಕ ಉಪಕ್ರಮದ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರ ಸಂಘದ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಲು ಆಹ್ವಾನಿಸಿದರು. ಮನುಕುಮಾರ್ ಅವರು ತೇಜಸ್ ಕನ್ನಡ ಸಂಘದ ಅಧ್ಯಕ್ಷರು. ಸಂಘದ ಐದನೇ ವಾರ್ಷಿಕೋತ್ಸವದಲ್ಲಿ ಕನ್ನಡಕ್ಕಾಗಿ ದುಡಿದ ಸಂಸ್ಥೆ-ವ್ಯಕ್ತಿಗಳನ್ನು ಸನ್ಮಾನಿಸುವ ಅರ್ಥಪೂರ್ಣ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದರು. ಸಂತೋಷದಿಂದ ನಾನು ಒಪ್ಪಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ.

ಕಾರ್ಯಕ್ರಮ ನಡೆದದ್ದು ೨೧ ಜನವರಿ ೨೦೧೯ ರಂದು. ನೆರೆದಿದ್ದ ಗಣ್ಯರು, ಸನ್ಮಾನಿತರ ನಡುವೆ, ನಾನು, ಲಾವಣ್ಯ ಹೆಬ್ಬಾಳ್ಮಠ್ ಕನ್ನಡ-ಪುಸ್ತಕ ಉಪಕ್ರಮ ಪ್ರತಿನಿಧಿಸಿದ್ದೆ. ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಖ್ಯಾತ ಲೇಖಕರೂ, ಪತ್ರಕರ್ತರೂ ಆದ ಡಾ ವಿಜಯಾ ರವರು, ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಎಸ್. ಜಿ. ಸಿದ್ಧರಾಮಯ್ಯ ನವರು ಪಾಲ್ಗೊಂಡಿದ್ದರು.

ಕಾರ್ಯಕರಮದ ಮುಂಚೆಯೇ ಮಾತಿಗೆ ಸಿಕ್ಕ ಡಾ ವಿಜಯಾರವರೊಂದಿಗೆ ನಮ್ಮ ಕೆಲಸದ ಬಗ್ಗೆ ವಿವರಿಸಿದೆ. ಕುತೂಹಲದಿಂದ ಕೇಳಿದ ಡಾ ವಿಜಯಾ ರವರು ತಮ್ಮಲ್ಲಿ ಮೂಡಿದ ಪ್ರಶ್ನೆಗಳನ್ನೂ ಕಾಳಜಿಯಿಂದ ಕೇಳಿ ಅರಿತುಕೊಂಡರು. ಉಪಕ್ರಮದ ಉದ್ದೇಶಗಳ ಹಿಂದಿನ ಪ್ರೀತಿ ಅವರಿಗೆ ತಕ್ಷಣ ಅರಿವಾಯಿತು. ಅವರ ಮೆಚ್ಚುಗೆಯ ಛಾಪು ಅವರ ಭಾಷಣದಲ್ಲೂ ಇದ್ದುದ್ದು ಅವರ ಸರಳತೆ ತೋರುತ್ತದೆ. ಮುಕ್ತವಾಗಿ ಅವರ ಭಾಷಣದಲ್ಲಿ ನಮ್ಮ ಕೆಲಸಗಳನ್ನು ಶ್ಲಾಘೀಸಿದ್ದರಲ್ಲದೆ ಕಾರ್ಯಕ್ರಮದ ನಂತರ ಕೂಡ ಪ್ರೀತಿಯಿಂದ ತಮ್ಮ ಮಾತುಗಳನ್ನು ನನ್ನೊಂದಿಗೆ ಮುಂದುವರೆಸಿದರು. ಸಂತೋಷದಿಂದ ಒಟ್ಟಿಗೆ ಊಟ ಮಾಡಿ ಅನ್ನುವ ಪ್ರೀತಿ ಸರಳೀಕೆ ಮನಮುಟ್ಟುವಂತಿತ್ತು.

ಇನ್ನೂ ವಿಶೇಷವೆಂದರೆ, ನಮ್ಮ ಕೆಲಸದ ಬಗ್ಗೆ ತಿಳಿದ ಪ್ರೊ ಸಿದ್ಧರಾಮಯ್ಯನವರು ಕಾರ್ಯಕ್ರಮದ ನಂತರ ಖುದ್ದಾಗಿ ಬಂದು ನನ್ನ ಮಾತನಾಡಿಸಿದರು. “ನಿಮ್ಮ ಕೆಲಸ ಅನನ್ಯವಾದುದು, ಪ್ರಸ್ತುತವಾದುದು. ನಿಮಗೆ ಯಾವುದೇ ರೀತಿಯ ಸಹಾಯ ಬೇಕಾದರೂ ನನ್ನನ್ನು ಬಂದು ವಿಧಾನ ಸೌಧದಲ್ಲಿ ಭೇಟಿಯಾಗಿ” ಎಂದು ವಿಧಾನ ಸೌಧಕ್ಕೆ ಆಹ್ವಾನಿಸಿದರು! ಇದಲ್ಲದೆ ನಮ್ಮ ಕೆಲಸವನ್ನು ಗುರುತಿಸಿ ಗೌರವಿಸಿದ್ದಕ್ಕೆ ತೇಜಸ್ ಕನ್ನಡ ಸಂಘದವರಿಗೆ ಖುದ್ದಾಗಿ ಅಭಿನಂದಿಸಿದರು.

ಒಟ್ಟಿನಲ್ಲಿ ವೈಯ್ಯಕ್ತಿಕವಾಗಿ ಕೂಡ ನನಗೊಂದು ವಿಶೇಷ ಸಾರ್ಥಕತೆಯ ಅನುಭವ. ಕಳೆದ ಮೂರು ವರ್ಷಗಳಲ್ಲಿ ನಮ್ಮೆಲ್ಲಾ ಸ್ವಯಂಸೇವಕರು ಪ್ರೀತಿಯಿಂದ ನಾವು ಇಂದು ಇಷ್ಟು ಧ್ವನಿ ಪುಸ್ತಕಗಳನ್ನು ಸಿದ್ಧಪಡಿಸಿ ಈಗ ವಿಧಾನ ಸೌಧಕ್ಕೆ ಆಹ್ವಾನ ಪಡೆದುಕೊಂಡಿದ್ದೇವೆ! ನಿಜವಾಗಿಯೂ ಒಂದು ಒಳ್ಳೆಯ ಕೆಲಸಕ್ಕೆ ಎಲ್ಲರು, ಪ್ರೀತಿಯಿಂದ ಸಹಕರಿಸುವರು ಎನ್ನುವ ಆಶಾಭಾವ ನನ್ನಲ್ಲಿ ಸಂತಸ ತಂದಿಟ್ಟಿತ್ತು. ಇನ್ನು ನನ್ನ ಕನಸು, ಪ್ರತಿ ವಿಶೇಷ ಮಕ್ಕಳ ಶಾಲೆಗಳಿಗೆ ನಮ್ಮ ಧ್ವನಿ ಗ್ರಂಥಾಲಯ ತಲುಪಬೇಕು ಅನ್ನುವುದು! ಕನ್ನಡಿಗರ ಪ್ರೀತಿಯಿಂದ ಇದು ಖಂಡಿತ ಪೂರ್ಣವಾಗುವುದು ಎನ್ನುವ ನನ್ನ ಭಾವನೆ ಇನ್ನೂ ದೃಢವಾಯಿತು! ನಿಮಗೂ ಈ ಕನಸನ್ನು ಪೂರ್ಣಗೊಳಿಸುವ ಸಂತೋಷ ಮೂಡಿದ್ದಲ್ಲಿ ನಮ್ಮೊಂದಿಗೆ ಸ್ವಯಂಸೇವಕರಾಗಿ!


Lavanya Hebbalmath