ಇ-ಕನ್ನಡ: ನಮ್ಮ ಮೊದಲ ಸಾರ್ವಜನಿಕ ಕಾರ್ಯಕ್ರಮ ಅನುಭವ

ಮುದ್ರಿಸಲಾದ ಭಿತ್ತಿ ಫಲಕದ: ಕ್ಲಿಷ್ಟವಾದ ತಾಂತ್ರಿಕ ಮಾಹಿತಿಯನ್ನು  ಸಂಕ್ಷಿಪ್ತವಾಗಿ, ಚಿತ್ರ ರೂಪದಲ್ಲಿ ವ್ಯಕ್ತಪಡಿಸುವ ಪ್ರಯತ್ನ ಮಾಡಿದ್ದೆವು

ಲಾವಣ್ಯ ಹೆಬ್ಬಾಳಮಠ್

ಪ್ರಾರಂಭದಿಂದಲೂ ಸ್ವಯಂಸೇವಕರೊಂದಿಗೆ ಮಾಹಿತಿ ತಾಣಗಳ ಮೂಲಕ ಕೆಲಸ ಮಾಡುತ್ತಿದ್ದ ನಮ್ಮ ತಂಡಕ್ಕೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೊದಲ ಅನುಭವ ಇ-ಕನ್ನಡ ಕಾರ್ಯಕ್ರಮ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಇ-ಜ್ಞಾನ ಸಹಯೋಗದಲ್ಲಿ, ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಇ-ಕನ್ನಡ ಶೀರ್ಷಿಕೆಯ ಸಂವಾದ ಮತ್ತು ಪ್ರದರ್ಶನ ಮಾರ್ಚ್ ಐದರ, ಭಾನುವಾರ ಆಯೋಜನೆಗೊಂಡಿತ್ತು. ಕಾರ್ಯಕ್ರಮದಲ್ಲಿ ನಮ್ಮದೊಂದು ಮಳಿಗೆ. ಸಹನಾ ವೇಣುಗೋಪಾಲ್ ರ ನೇತ್ರತ್ವದಲ್ಲಿ, ಸಾಂಚಿತ ಎಸ್ ಆರ್ , ರಕ್ಷಿತ್ ಭಾಸ್ಕರ್, ಮತ್ತು ನಾನು (ಲಾವಣ್ಯ) ಮಳಿಗೆಯಲ್ಲಿದ್ದೆವು. ಉಪಕ್ರಮದ ಸಂಕ್ಷಿಪ್ತ ಮಾಹಿತಿ ಒದಗಿಸುವ ಒಂದು ಭಿತ್ತಿ ಫಲಕ ಪ್ರದರ್ಶಿಸಿದ್ದೆವು. ವಿಶೇಷ ಮಕ್ಕಳ ಶಾಲೆಗಳಿಗೆ ಕಳುಹಿಸಲಾದ ಹತ್ತನೇ ಮತ್ತು ಒಂಬತ್ತನೇ ತರಗತಿ ಸಿಡಿ ಪ್ರತಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದೆವು. ನಮ್ಮೆಲ್ಲಾ ಕೆಲಸಗಳ ತಾಣವಾದ ನಮ್ಮ ಜಾಲತಾಣವನ್ನು ವೀಕ್ಷಕರಿಗೆ ಪರಿಚಯಿಸಲು ನನ್ನ ಲ್ಯಾಪ್ಟಾಪ್ ನಲ್ಲಿ ಅವಕಾಶ ಮಾಡಿದ್ದೆವು. ಕಾರ್ಯಕ್ರಮ ವ್ಯವಸ್ಥಾಪಕರು ಬಹಳ ಅಚ್ಚುಕಟ್ಟಾಗಿ ಎಲ್ಲವನ್ನೂ ವ್ಯವಸ್ಥೆ ಮಾಡಿದ್ದರಿಂದ ನಮ್ಮ ಅಂಗಡಿ ಸಜ್ಜುಗೊಳಿಸಲು ಸರಳವಾಗಿತ್ತು . ಈ ಕಾರ್ಯದಲ್ಲಿ ರಕ್ಷಿತ್ ರವರು ಸಹಕರಿಸಿದರು.

ಸಿದ್ಧತೆ

ಇ-ಕನ್ನಡ ಕಾರ್ಯಕ್ರಮ ಗಮನದಲ್ಲಿಟ್ಟುಕೊಂಡು ಪಠ್ಯಪುಸ್ತಕದ ಧ್ವನಿ ಕಡತಗಳನ್ನು ಐಟ್ಯೂನ್ಸ್ ಪಾಡ್ಕ್ಯಾಸ್ಟ್ ಗಳಾಗಿ ಅಪ್ಲೋಡ್ ಮಾಡುವ ಕಾರ್ಯ ಒಂದು ವಾರಗಳ ಹಿಂದೆ  ಸಮರೋಪಾದಿಯಲ್ಲಿ ನಡೆಸಿದ್ದು ವಿಶೇಷ. ಮೂಲ ರಚನಾ ವ್ಯವಸ್ಥೆ ಸಿದ್ಧವಾಗಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ, ಆದರೆ ಪ್ರತಿ ಪುಸ್ತಕದ ಅಧ್ಯಾಯಗಳನ್ನು ಬಿಡಿಯಾಗಿ ಪಾಡ್ಕ್ಯಾಸ್ಟ್ ಫೀಡ್ ಗೆ ಅಪ್ಲೋಡ್ ಮಾಡುವ ಕಾರ್ಯದಲ್ಲಿ ಕನ್ನಡೇತರ ಸಹೃದಯಿ ಸ್ನೇಹಿತರು ಸಹಕರಿಸಿದ್ದು ಒಂದು ವಿಶೇಷ ಸ್ಮರಣೀಯ ಅನುಭವ. ಈ ಕಾರ್ಯದಲ್ಲಿ ಸಹಕರಿಸಿದ ಪಾಯಲ್ ಗಾಂಗೂಲಿ ರವರಿಗೆ ನಮ್ಮ ವಿಶೇಷ ಧನ್ಯವಾದಗಳು. ತಮ್ಮ ಕೆಲಸದ ಬಿಡುವಿನಲ್ಲಿ ಕ್ಲಿಷ್ಟವಾದರೂ ಭಿತ್ತಿ ಫಲಕ ಮತ್ತು ಪೋಡ್ಡ್ಕಾಸ್ಟ್ ಮಾಹಿತಿ ನೀಡುವ ವಿಸಿಟಿಂಗ್ ಕಾರ್ಡ್ ಮೈಸೂರಿನಿಂದ ಸಹನಾ ರವರು ಮುದ್ರಿಸಿಕೊಂಡು ತಂದರು. ಮುದ್ರಣದಲ್ಲಿ ಮೈಸೂರಿನ ಸತ್ಯನಾರಾಯಣನ್ ರವರ ಸಹಕಾರ ಇಲ್ಲಿ ಸ್ಮರಣೀಯ. ಹಾಗೆಯೇ ಮುದ್ರಣ ಮತ್ತಿತರೇ ತಯಾರಿಯಲ್ಲಿ ಸಮಯ ಲೆಕ್ಕಿಸದೆ ತಮ್ಮ ಸಹಕಾರ ನೀಡಿದ ಮಿಥುನ್ ಬಿ ಏನ್, ಸೋಮಶೇಖರ್ ಬಿ., ವೀರೇಂದ್ರ ಮತ್ತಿತರನ್ನು ಇಲ್ಲಿ ಪ್ರೀತಿಯಿಂದ ಸ್ಮರಿಸುತ್ತಿದ್ದೇವೆ.

ಪ್ರದರ್ಶನ

ಕುತೂಹಲದಿಂದ ನಮ್ಮ ಮಳಿಗೆಗೆ ಭೇಟಿ ನೀಡಿದ ಎಲ್ಲರಿಗೂ ಶಕ್ತಿ ಮೀರಿ ನಮ್ಮ ಉಪಕ್ರಮದ ಕಾರ್ಯಗಳು, ಕಾರ್ಯಶೈಲಿ, ವ್ಯಾಪ್ತಿ ಬಗ್ಗೆ ವಿವರಿಸಿದೆವು. ಪಾಡ್ಕ್ಯಾಸ್ಟ್ ರೂಪದ ಧ್ವನಿ ಪುಸ್ತಕಗಳ ಪರಿಚಯಿಸಲು ನಮ್ಮ ನಮ್ಮ ಮೊಬೈಲ್ ಗಳಲ್ಲಿ ಕೇಳಿಸಿದೆವು. ನಮ್ಮ ಸ್ವಯಂಸೇವಕರಲ್ಲಿ ಉಮಾ ಎಚ್ ಏನ್ ಮತ್ತು ಮಂಜುಳಾ ಬಬಳಾದಿ ನಮ್ಮನ್ನು ಭೇಟಿಯಾಗಿದ್ದು ನಮಗೆ ಸಂತೋಷ ನೀಡಿದ ಸಂಗತಿ. ಭೇಟಿ ನೀಡಿದ ಅನೇಕ ಸಹೃದಯರು ನಮ್ಮ ಕೆಲಸದಲ್ಲಿ ಪಾಲ್ಗೊಳ್ಳಲು ಇಚ್ಛೆ ವ್ಯಕ್ತಪಡಿಸಿ ನೋಂದಾಯಿಸಿಕೊಂಡರು. ಸುಮಾರು ನಾಲ್ಕು  ಗಂಟೆಗಳ ಸತತ ಪ್ರಾತ್ಯಕ್ಷಿಕೆ ವಿವರಣೆ ನೀಡುತ್ತಾ ನಾವು ನಾಲ್ಕು ಜನ ದಣಿದಿದ್ದರೂ ನಮ್ಮ ಸ್ಪೂರ್ತಿ ಇಂಗಿರಲಿಲ್ಲ!  ಆಸಕ್ತಿ ಇದ್ದವರಿಗೆ ಕನ್ನಡ ಧ್ವನಿ ಸಂಶ್ಲೇಷಣಾ ಡೇಟಾಬೇಸ್ ಗಾಗಿ ಎಂ. ಡಿ. ಪಲ್ಲವಿಯವರು ತಮ್ಮ ಧ್ವನಿ ನೀಡಿರುವ ವಿಷಯವನ್ನು ತಿಳಿಸುತ್ತಾ ಪ್ರಯೋಗಾತ್ಮಕ ಔಟಪುಟ್ ಗಳ ಒಂದೆರೆಡು ಧ್ವನಿ ತುಣುಕುಗಳನ್ನು ಕೂಡ ಕೇಳಿಸಿದೆವು.

ಭೇಟಿ ನೀಡಿದ ಜನರಿಗೆ ನಾವು ತಿಳಿಸಿದ ವಿಷಯಗಳು ಮುಖ್ಯವಾಗಿ ಈ ಜಾಡಿನಲ್ಲಿದ್ದವು:

  • ಯೂನಿಕೋಡ್ ಕನ್ನಡ  ತಂತ್ರಾಂಶ ಬಳಸಿ ಕನ್ನಡ ಬ್ರೈಲ್ ಮತ್ತು ಧ್ವನಿ ಪುಸ್ತಕಗಳನ್ನು ಸ್ವಯಂಸೇವಕರ ಸಹಕಾರದಿಂದ ರಚಿಸುವ ಉದ್ದೇಶ ನಮ್ಮ ಉಪಕ್ರಮದ್ದು. ಕರ್ನಾಟಕದ ೩೪ ಅಂಧ ಮಕ್ಕಳ ಶಾಲೆಗಳಿಗೆ ನಾವು ತಯಾರಿಸಿದ ಹತ್ತು ಮತ್ತು ಒಂಬತ್ತನೇ ತರಗತಿ ವಿಶೇಷ ಪುಸ್ತಕಗಳ ಡಿಜಿಟಲ್ ಪ್ರತಿಗಳನ್ನು ಕಳುಹಿಸಿಕೊಟ್ಟಿದ್ದೇವೆ.
  • ಪುಸ್ತಕದ ಅಧ್ಯಾಯಗಳ ಸಂಶ್ಲೇಷಿತ ಧ್ವನಿ ಕಡತಗಳು ಐಟ್ಯೂನ್ಸ್ ಪಾಡ್ಕ್ಯಾಸ್ಟ್ ಆಗಿ ಉಚಿತವಾಗಿ ಲಭ್ಯಮಾಡಿದ್ದೇವೆ; ಪಾಡ್ಕ್ಯಾಸ್ಟ್ಸ್ ಆಂಡ್ರಾಯ್ಡ್ ಮತ್ತು ಐ ಓಸ್ ಎರಡರಲ್ಲೂ ಲಭ್ಯವಿದೆ.
  • ಬ್ರೈಲ್ ಪುಸ್ತಕಗಳನ್ನು ನಮ್ಮ ಜಾಲ ತಾಣದಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.

ಎಡೆಬಿಡದೆ ಕುತೂಹಲದಿಂದ ಆಗಮಿಸುತ್ತಿದ್ದವರ ನಡುವೆ ಪ್ರೊಫೆಸರ್ ಎ ಜಿ ರಾಮಕೃಷ್ಣನ್ ರವರು ನಮ್ಮನ್ನು ಮಳಿಗೆಯಲ್ಲಿ ಭೇಟಿಯಾಗಿದ್ದು ನಮ್ಮ ಸ್ಪೂರ್ತಿ ಹೆಚ್ಚಿಸಿತು. ನಮ್ಮೊಡನೆ ನೆರೆದಿದ್ದವರ ಪ್ರಶ್ನೆಗಳಿಗೆ ಉತ್ತರಿಸುವುದರೊಡನೆ ನಮ್ಮ ತಂಡದಲ್ಲಿ ಒಬ್ಬರಾಗಿ ಅವರು ಸಮಯ ಕಳೆದದ್ದು ವಿಶೇಷ. ಹತ್ತು ಮತ್ತು ಒಂಬತ್ತನೇ ತರಗತಿ ಸಿಡಿ ಪ್ರತಿಗಳನ್ನು ಈ ಸಂದರ್ಭದಲ್ಲಿ ಅವರಿಗೆ ಸಲ್ಲಿಸಲಾಯಿತು. ಹಿರಿಯ ವಿಜ್ಞಾನಿಗಳು ಮತ್ತು ಲೇಖಕರೂ ಆದ ಡಾ. ಸಿ ಆರ್ ಸತ್ಯ ರವರು ನಮ್ಮನ್ನು ಭೇಟಿಯಾಗಿ ನಮ್ಮ ಉಪಕ್ರಮದಲ್ಲಿ ಆಸಕ್ತಿ ತೋರಿದ್ದು ನಮಗೆ ರೋಮಾಂಚನ ನೀಡಿದ ಸಂಗತಿ.

" ಕನ್ನಡ ಭಾಷೆ ಮತ್ತು ಅಂಧರ ಬೆಳಕು ಕನ್ನಡ ಪುಸ್ತಕವೇ "
ಮಾಯಣ್ಣ , ಅಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು

ದಯಾನಂದರವರ ಭೇಟಿ

ಈ ಸಂದರ್ಭದಲ್ಲಿ ನಡೆದ ಒಂದು ಮಹತ್ವದ ಘಟನೆ, ಕನ್ನಡ ಮತ್ತು ಸಂಸ್ಕೃತ ಇಲಾಖೆ ನಿರ್ದೇಶಕರಾದ ಶ್ರೀಯುತ ಕೆ. ಎ. ದಯಾನಂದ ರವರು, ಭೇಟಿ ನೀಡಿದ್ದು. ಕುತೂಹಲದಿಂದ ಆಲಿಸಿದ ಅವರಿಗೆ ನಮ್ಮ ಉಪಕ್ರಮದ ಸ್ಥೂಲ ಚಿತ್ರಣ ಅವರಿಗೆ ಒದಗಿಸಿದೆವು. ವಿಶೇಷ ಪುಸ್ತಕರಚನೆಯ ಸವಾಲುಗಳು, ಒ. ಸಿ ಆರ್ ತಂತ್ರಾಂಶದ ಮಿತಿ ಇನ್ನಿತಾರೇ ಸಮಸ್ಯೆಗಳಿಂದ ಯುನಿಕೋಡ್ ಪ್ರತಿ ತಯಾರಿಸುವಲ್ಲಿ ನಮ್ಮ ಸ್ವಯಂಸೇವಕರು ವಹಿಸುತ್ತಿರುವ ಶ್ರಮವನ್ನು ಅವರಿಗೆ ವಿವರಿಸಿದೆವು. ಪ್ರಕಟಿತವಾದ ಪಠ್ಯಪುಸ್ತಕಗಳು ಡಿಜಿಟಲ್ ರೂಪದಲ್ಲಿ ದೊರೆತಲ್ಲಿ ಪಠ್ಯಪುಸ್ತಕ ರಚನಾ ಪ್ರಕ್ರಿಯೆ ಸರಳವಾಗುವ ಸಾಧ್ಯತೆಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಸಿದೆವು. ಹಾಗೆಯೇ ವಿಶೇಷ ಪುಸ್ತಕಗಳ ರಚನೆ ತ್ವರಿತಗೊಳಿಸಲು ಪಠ್ಯಪುಸ್ತಕಗಳ ಮೂಲ ಡಿಜಿಟಲ್ ಪ್ರತಿಯನ್ನು ನಮ್ಮ ಉಪಕ್ರಮಕ್ಕೆ ಒದಗಿಸುವ ಮನವಿ ಅವರಿಗೆ ಸಲ್ಲಿಸಲಾಯಿತು. ಹಿರಿಯ ಪತ್ರಕರ್ತ ರವಿ ಹೆಗ್ಡೆ , ಲೇಖಕ ಟಿ.ಜಿ. ಶ್ರೀನಿಧಿ, ಪ್ರೊಫೆಸರ್ ಎ ಜಿ ರಾಮಕೃಷ್ಣನ್ ಮತ್ತಿತ್ತರು ಉಪಸ್ಥಿತರಿದ್ದರು. ಕಾರ್ಯಕ್ರಮ ಆಯೋಜಿಸುವಲ್ಲಿ ಇ-ಜ್ಞಾನ ಸಂಸ್ಥೆಯ ಶ್ರೀನಿಧಿ ಟಿ. ಜಿ. ಮತ್ತು ತಂಡದ ಕಾರ್ಯವಿಧಾನ, ಕಾರ್ಯಕ್ರಮವನ್ನು ಪ್ರಭಾವಿ ಮತ್ತು ಅರ್ಥಪೂರ್ಣವಾಗಿಸಿತು ಎಂಬುದು ನಮ್ಮ ಅನಿಸಿಕೆ.

ಸಲ್ಲಿಸಲಾದ ಮನವಿ ಪತ್ರ: ಕೊಂಡಿ

ಕಾರ್ಯಕ್ರಮದ ಬಗೆಗಿನ ವರದಿಗಳು 

ಕಣಜ

ಇ-ಜ್ಞಾನ

Ondindia-ಕನ್ನಡ