ಮಗಳು ಆಫೀಸಿನಿಂದ ಬರುವುದಕ್ಕೆ ಕಾದಿದ್ದು ನನಗೆ ಕಂಪ್ಯೂಟರ್ ಹೇಳಿಕೊಡು ಎಂದೆ

ಗೃಹಿಣಿ. ಹದಿನಾಲ್ಕು ವರ್ಷಗಳ ಕಾಲ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿದ ಅನುಭವವೂ ಇದೆ. ಪಿ. ಯು. ಸಿವರೆಗೆ ಓದಿದ್ದ ನಾನು ನನ್ನ ನಲವತ್ತೆಂಟನೇ ವಯಸ್ಸಿನಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಮಾನಸ ಗಂಗೋತ್ರಿ ಮೈಸೂರಿನಿಂದ ಕನ್ನಡ ಎಮ್. ಎ. ಪದವಿ ಪಡೆದಿರುತ್ತೇನೆ. 

ನನ್ನ ಯಜಮಾನರು ರಾಜಾರಾಂ. ಡೆಪ್ಯೂಟಿ ಜನರಲ್ ಮ್ಯಾನೇಜರ್ ಆಗಿ (ಬಿ. ಎಸ್. ಎನ್. ಎಲ್. ) ನಿವೃತ್ತಿ ಹೊಂದಿರುತ್ತಾರೆ. ಇಬ್ಬರು ಮಕ್ಕಳು. ಮಗ ಎಂ. ಎಸ್. ಮುಗಿಸಿ, ಅಮೇರಿಕಾದ ನಿರ್ವಹಣಾ ಸಲಹಾ ಸಂಸ್ಥೆಯೊಂದರಲ್ಲಿ ವಿಶ್ಲೇಷಣಾ ಸಹಾಯಕರು. ಮಗಳು ಬಿ. ಎ. ಜರ್ನಲಿಸಂ ಮುಗಿಸಿ, ಡಿಜಿಟಲ್ ಮಾರ್ಕೆಟಿಂಗ್ ಏಜನ್ಸಿ (ಎಮ್. ಎನ್. ಸಿ)ಯೊಂದರಲ್ಲಿ ಕೆಲಸದಲ್ಲಿದ್ದಾಳೆ. ಸಾಹಿತ್ಯ ಪ್ರಧಾನವಾದ ಸಂಗೀತ, ಭಾವಗೀತೆಗಳನ್ನು ಕೇಳುವುದು, ಕನ್ನಡ ಪುಸ್ತಕಗಳನ್ನು ಓದುವುದು ಹಾಗೂ ಪ್ರವಾಸ ನನ್ನ ಹವ್ಯಾಸ. ಯಾವುದೇ ಹೊಸ ಕೆಲಸವನ್ನಾದರೂ ಕಲಿತು ಮಾಡುತ್ತೇನೆ ಎಂಬ ವಿಶ್ವಾಸ. 

ವಿದ್ಯೆಯ ಮಹತ್ವವನ್ನು ಅರಿಯದೇ ವಿದ್ಯಾಭ್ಯಾಸ ಮುಗಿಸಿದ್ದೆ. ಎಂಟು ವರ್ಷಕ್ಕೆ ನನ್ನ ಮಗ ದಂಟು ಎಂಬ ಮಾತಿನಂತೆ ಎಂಟನೇ ವಯಸ್ಸಿನಲ್ಲಿ ಮೂರನೇ ತರಗತಿಗೆ ಸೇರಿ ಪಿ ಯು ಸಿವರಗೆ ಓದಿದ್ದೆ. ಓದುವ ವಯಸ್ಸಿನಲ್ಲಿ ಓದಲಾಗಲಿಲ್ಲ ಎಂಬ ಕೊರಗು ಕಾಡುತ್ತಿತ್ತು. “ವಿದ್ಯೆಗೆ ವಯಸ್ಸಿಲ್ಲ ನಿನಗೆ ಆಸಕ್ತಿ ಇದ್ದರೆ ಈಗಲೂ ಓದಬಹುದು” ಎಂದು ಸಹಕಾರ, ಉತ್ತೇಜನ ನೀಡಿ ನಲವತ್ತಾರರ ವಯಸ್ಸಿನಲ್ಲಿ ಮತ್ತೆ ವಿದ್ಯಾರ್ಥಿಯನ್ನಾಗಿ ಮಾಡಿದರು, ಮನೆಯವರು. ನಲವತ್ತೆಂಟನೇ ವಯಸ್ಸಿನಲ್ಲಿ ಮಾನಸ ಗಂಗೋತ್ರಿ, ಮೈಸೂರಿನಿಂದ ಕನ್ನಡ ಎಂ. ಎ ಪದವಿ ಪಡೆದು ಸಂಭ್ರಮಿಸಿದೆ. 

ಸಮಯದ ಸದುಪಯೋಗವಾಗುವ ಯಾವುದಾದರೂ ಕೆಲಸ ಮಾಡಬೇಕೆಂಬ ಹಂಬಲ. ನನ್ನ ತಮ್ಮ ದೂರವಾಣಿ ಕರೆ ಮಾಡಿ “ಆನ್ ಲೈನ್ ನಲ್ಲಿ ಏನೋ ನೋಡುತ್ತಿದ್ದೆ, ಒಂದು ಜಾಹೀರಾತು ಬಂದಿದೆ, ಕನ್ನಡ ಬರಬೇಕಂತೆ, ಕಂಪ್ಯೂಟರ್ ಇದ್ದರೆ ಸಾಕಂತೆ, ವಾಲಂಟಿಯರ್ಸ ಬೇಕಂತೆ. ನಿನಗೆ ಆ ಲಿಂಕ್ ಕಳುಹಿಸಿದ್ದೇನೆ ನೋಡು” ಎಂದ. ತಕ್ಷಣ ಮೇಲ್ ಓಪನ್ ಮಾಡಿ ಎಂ. ಡಿ. ಪಲ್ಲವಿಯವರ ಮಾತುಗಳನ್ನು ಕೇಳಿದೆ. ಮಗಳು ಆಫೀಸಿನಿಂದ ಬರುವುದಕ್ಕೆ ಕಾದಿದ್ದು ಅವಳಿಗೆ ವಿಷಯ ತಿಳಿಸಿ ನಾನು ಈ ಕೆಲಸ ಮಾಡಲೇಬೇಕು ನನಗೆ ಕಂಪ್ಯೂಟರ್ ಜ್ಞಾನ ಕಡಿಮೆ ಇರುವುದರಿಂದ ಕೆಲಸ ಪ್ರಾರಂಭಿಸಲು ಬೇಕಾದ ತಯಾರಿಮಾಡಿ ನನಗೆ ಹೇಳಿಕೊಡು ಎಂದೆ. ನನ್ನ ಉತ್ಸಾಹಕ್ಕೆ ಮಗಳು, ಯಜಮಾನರು ಸಹಕರಿಸಿ ಪ್ರೋತ್ಸಾಹಿಸಿದರು. ಐವತ್ತಾರನೇ ವಯಸ್ಸಿನಲ್ಲಿ ಮತ್ತೆ ವಿದ್ಯಾರ್ಥಿಯಾಗುವ ಅವಕಾಶ ನನ್ನದಾಯಿತು.  

ಕನ್ನಡದ ಪಾಠ, ಪದ್ಯ, ವ್ಯಾಕರಣ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ ಪಾಠಗಳನ್ನು ಓದಿ ಪ್ರೂಫ್ ರೀಡ್ ಮಾಡುವಾಗ ಆದ ಸಂತೋಷ ಅಪಾರ. ಮನಸ್ಸಿನಲ್ಲಿ ಮಾಸದೆ ಉಳಿಯ ಬಹುದಾದ  ಅನೇಕ ಮಾಹಿತಿಗಳು ಈ ಮೂಲಕ ದೊರೆತು ನನ್ನ ತಿಳುವಳಿಕೆಯನ್ನು ಶ್ರೀಮಂತಗೊಳಿಸಿತು. ಈ ವಿಷಯಗಳನ್ನು ಮನೆಯವರೊಡನೆ, ಸ್ನೇಹಿತರೊಡನೆ ಹಂಚಿಕೊಳ್ಳುವ ಸಂತೋಷಕ್ಕೆ ಬೆಲೆ ಕಟ್ಟಲಾಗುವುದಿಲ್ಲ. . 

ಇದೇ ರೀತಿ ಇನ್ನು ಹೆಚ್ಚಿನ ಪಾಠಗಳನ್ನು ಪ್ರೂಫ್-ರೀಡ್ ಮಾಡುವ ಆಸಕ್ತಿ ನನ್ನದು. ಕನ್ನಡ ಪುಸ್ತಕ ತಂಡ ಪಠ್ಯ ಪುಸ್ತಕಗಳ ಜೊತೆಗೆ ಪಠ್ಯೇತರ ಪುಸ್ತಕಗಳನ್ನು ಹೊರತರಲಿ, ಈ ಡಿಜಿಟಲ್ ಪುಸ್ತಕಗಳು ಅಗತ್ಯವಿರುವ ಎಲ್ಲ ಮಕ್ಕಳಿಗೂ ಕೈಗೆಟಕುವಂತಾಗಲಿ, ನಾನು ಈ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತಾಗಲಿ, ಎಂದು ಆಶಿಸುವ, ನನ್ನ ಈ ಅಳಿಲು ಸೇವೆಗೆ ಅವಕಾಶ ಮಾಡಿಕೊಟ್ಟ ರಾಕೇಶ್, ಸಹನಾ ಮತ್ತು ಕನ್ನಡ ಪುಸ್ತಕ ತಂಡಕ್ಕೆ ನನ್ನ ಹೃತ್ಪೂರ್ವಕ ನಮನಗಳು.

ಉಮಾ. ಎಚ್. ಎನ್